ಕಮಾನಿನ ಸೇತುವೆ : ಕಮಾನಿನಾಕಾರದ ಕಪ್ಪಿತದ ಆಕೃತಿಯನ್ನು ಬಳಸಿ ನಿರ್ಮಿಸಿದ ಸೇತುವೆ (ಆರ್ಚ್ಬಿಡ್ಜ್‌). ಸೇತುವೆಗಳಲ್ಲೆಲ್ಲ ಅತ್ಯಂತ ಲಾವಣ್ಯಮಯವಾದ ಮಾದರಿ. ಇದನ್ನು ಮರ, ಇಟ್ಟಿಗೆ, ಕಲ್ಲು, ಉಕ್ಕು, ಪ್ರಬಲಿತ ಕಾಂಕ್ರೀಟ್-ಈ ಸಾಮಗ್ರಿಗಳಿಂದ ಕಟ್ಟಬಹುದು. 
ಹಿಂದೆ 4.32 ಮೀ. ಕಣ್ಣಿನ ಮರದ ಕಮಾನಿನ ಸೇತುವೆಯನ್ನು ಕಟ್ಟಿದ್ದರು. ಬೆಂಕಿಯ ಭಯಕ್ಕಾಗಿ ಈಗ ಎಲ್ಲಿಯೂ ಮರದ ಕಮಾನುಗಳನ್ನು ಕಟ್ಟುತ್ತಿಲ್ಲ. 

ಇಟ್ಟಿಗೆಯ ಕಮಾನುಗಳ ಮೇಲೆ ಒತ್ತು ತ್ರಾಸ ಮಾತ್ರ ಬರುವುದರಿಂದ ಇವನ್ನು ಸೇತುವೆಗಳಲ್ಲಿ ವಿಶೇಷವಾಗಿ ಉಪಯೋಗಿಸುತ್ತಿದ್ದರು. ಸಾಮಾನ್ಯವಾದ ಇಟ್ಟಿಗೆಗಳು ಚದರ ಸೆಂಟಿಮೇಟರಿನ 10 ಕಿಗ್ರಾಂ/ಚಸೆಂಮಿ ಭಾರವನ್ನೂ ಸಾಮಥರ್ಯ್‌ವಿರುವ ಇಟ್ಟಿಗೆಗಳು 15 
ಕಿಗ್ರಾಂ/ಚಸೆಂಮಿಮೀ ಮೀರಿ ತಡೆಯಬಲ್ಲವು. 1858 ರಲ್ಲಿ ಶಿವಮೊಗ್ಗದಲ್ಲಿ ತುಂಗಾನದಿಯ ಮೇಲೂ ಭದ್ರಾವತಿಯಲ್ಲಿ ಭದ್ರಾನದಿಯ ಮೇಲೂ ಮೂರು ಕೇಂದ್ರಗಳಿಂದ ವೃತ್ತಖಂಡಗಳನ್ನೆಳೆದು ಸುಮಾರಾಗಿ ಅರ್ಧದೀರ್ಘ ವೃತ್ತಾಕಾರವಾದ 15ಮೀ ಕಣ್ಣಿನ ಬಹು ಕಮಾನುಗಳ 
ಸೇತುವೆಗಳನ್ನು ಕಟ್ಟಿದ್ದಾರೆ. ಅವು ಇಂದಿಗೂ ಬಸ್ಸು ಲಾರಿಗಳ ತೂಕಗಳನ್ನು ತಡೆದು ನಿಂತಿವೆ. ದೊಡ್ಡ ರಸ್ತೆಗಳ ಮೇಲೆ ಅಲ್ಲದಿದ್ದರೂ ಹಳ್ಳಿಗಳ ರಸ್ತೆಗಳ ಮೇಲಿನ ಸೇತುವೆಗಳಲ್ಲಿ ಇಟ್ಟಿಗೆಯ ಸಾಮಾನುಗಳನ್ನು ಬಳಸಿ ಸಿಮೆಂಟ್ ಮತ್ತು ಉಕ್ಕಿನ ಮೇಲಿನ ಅವಲಂಬನೆಯನ್ನು 
ಕಡಿಮೆ ಮಾಡಿಕೊಳ್ಳಬಹುದು.

ಸಾಧಾರಣವಾದ ಕಲ್ಲು ಸೆಂ.ಮೀ.ಗೆ 21 ಕಿಲೋ ಗ್ರಾಂಗಳನ್ನೂ ಗ್ರಾನೈಟ್ ಕಲ್ಲು ಸು. 30 ಕಿಲೋ ಗ್ರಾಂಗಳನ್ನು ಹೊರಬಲ್ಲದು. 1817ರಲ್ಲಿ ಲಂಡನ್ನಿನ ಥೇಮ್ಸ್‌ ನದಿಯ ಮೇಲೆ ಕಟ್ಟಿದ ವಾಟರ್ಲೂ ಸೇತುವೆಯಲ್ಲಿ 36.6ಮೀಗಳ ಕಣ್ಣುಗಳಿವೆ. ಭಾರತದಲ್ಲಿ 
ಅನುಕೂಲವಾದ ಕಡೆಗಳಲ್ಲಿ 30ಮೀ ಕಣ್ಣಿನ ವರೆಗೆ ಕಲ್ಲಿನ ಕಮಾನುಗಳನ್ನು ಸೇತುವೆಗಳಲ್ಲಿ ಧಾರಾಳವಾಗಿ ಬಳಸಬಹುದು. ಆದರೆ ಮೈಸೂರು ಸೀಮೆಯ ರಾಮನಾಥಪುರದಲ್ಲಿ ಕಾವೇರಿ ನದಿಯ ಮೇಲೆ 1937ರಲ್ಲಿ ಕಟ್ಟಿ ಮುಗಿಸಿದ 9.15ಮೀ ಅಗಲದ 21 ಕಣ್ಣಿನ ಕಲ್ಲಿನ 

ಕಮಾನಿನ ಸೇತುವೆಯೇ ಈ ನಮೂನೆಯ ಕೊನೆಯ ಸೇತುವೆ ಎಂದು ತೋರುತ್ತದೆ. ಇದು ಶ್ಲಾಘ್ಯವಾದ ಪ್ರವೃತ್ತಿಯೆಂದು ಹೇಳಲಾಗುವುದಿಲ್ಲ. ಯಂತ್ರಶಿಲ್ಪದ ಕೌಶಲ ಬೆಳೆಯುತ್ತಿರುವ ಸ್ವತಂತ್ರ ಭಾರತದಲ್ಲಿ ಸೂಕ್ತವಾದ ಸಂಶೋಧನೆಗಳನ್ನು ನಡೆಸಿ ಹೇರಳವಾಗಿ 
ದೊರಕುವ ಕಲ್ಲನ್ನು ಸೇತುವೆಯ ಕಮಾನುಗಳಿಗೆ ಉಪಯೋಗಿಸಿಕೊಳ್ಳುವುದು ರಾಷ್ಟ್ರದ ದೃಷ್ಟಿಯಿಂದ ಹಿತಕರ.
ಕಮಾನಿನ ಸೇತುವೆಯಲ್ಲಿ ಕಲ್ಲುಗಾರೆಯ ಕಂಬಗಳ ಉದ್ದದಲ್ಲಿ 1.80ಮೀ ಅಂತರದಲ್ಲಿ ಒಂದರಂತೆ ಕಂಬಗಳಿಗೆ ನಡುವೆ ಕಮಾನಿನ ಒಳಭಾಗದ (ಇಂಟ್ರೇಡಾಸ್) ಆಕಾರಕ್ಕೆ ಹೊಂದುವ ಮರದ ಸರಕಟ್ಟುಗಳನ್ನು (ಸೆಂಟ್ರಿಂಗ್ಸ್‌) ಕಂಬಗಳ ಪಕ್ಕಗಳಿಂದ ಚಾಚುವ ಕಲ್ಲುಗಳ 
ಮೇಲೆ ಎಳೆದ ಮರದ ತೊಲೆಯ ಮೇಲೆ ಇಟ್ಟ ತಾಂಡವಾಳದ ಮರಳು ಪೆಟ್ಟಿಗೆಗಳ ಮೇಲೆ ನಿಲ್ಲಿಸುತ್ತಾರೆ. ಒಂದು ಸರಕಟ್ಟಿಗೂ ಇನ್ನೊಂದಕ್ಕೂ ನಡುವೆ 8 ಸೆಂಮೀ ಅಂತರದಲ್ಲಿ ಸರಕಟ್ಟುಗಳ ಮೇಲುಭಾಗದಲ್ಲಿ ಭದ್ರಪಡಿಸುವ ಪಟ್ಟಿಗಳ ಮಧ್ಯೆ ಮರದ ತೀರುಗಳನ್ನು 
ಜೋಡಿಸುತ್ತಾರೆ. ಇವುಗಳ ಮೇಲೆ ಕಮಾನಿನ ಕಲ್ಲುಗಳು ಕೂರುತ್ತವೆ. ಕಮಾನಿನ ಆಕಾರಕ್ಕೂ ದಪ್ಪಕ್ಕೂ ಸರಿಯಾಗಿ ಸು. 30 ಸೆಂಮೀ ಅಗಲದ ಬೆಣೆಕಲ್ಲುಗಳನ್ನೂ ಕೊಂಚ ಅಗಲವಾದ ಎತ್ತರವಾದ ನೆತ್ತಿಯ ಕಲ್ಲುಗಳನ್ನೂ ಕ್ವಾರಿಮಾಡಿ ನಯವಾಗಿಸಿ ಮೊದಲೇ 
ಶೇಖರಿಸುತ್ತಾರೆ. 

ಸೇತುವೆಯಲ್ಲಿ ಗುದ್ದುಗಂಬದಿಂದ ಹಿಡಿದು ಪ್ರತಿ ನಾಲ್ಕನೆಯ ಕಂಬವನ್ನು ಕಟ್ಟುವಾಗ ಒಂದೇ ಕಡೆಯಿಂದ ಬರುವ ಒದೆತವನ್ನು ತಡೆದು ನಿಲ್ಲುವುದಕ್ಕಾಗಿ ಕೊಂಚ ದಪ್ಪವಾಗಿ ಮಾಡಬೇಕು. ಕಂಬಗಳು ಕಮಾನು ಚಿಮ್ಮುವ ಮಟ್ಟಕ್ಕೆ ಬಂದ ಮೇಲೆ ಅದರ ಎರಡು 
ಕಡೆಗಳಲ್ಲಿಯೂ ಕಮಾನಿನ ಆಕಾರಕ್ಕೆ ಹೊಂದುವ ಬೆನ್ನಿನ ಕಲ್ಲುಗಳನ್ನು ಗಾರೆಯಲ್ಲಿ ಕೂರಿಸುತ್ತಾರೆ. ಕಮಾನುಗಳನ್ನು ಒಂದು ಗುದ್ದುಗಂಬದಿಂದ ಪ್ರಾರಂಭಿಸಿ ಒಂದಾದಮೇಲೊಂದನ್ನು ಕ್ರಮವಾಗಿ ಕಟ್ಟುತ್ತ ಹೋಗುತ್ತಾರೆ. ಒಂದು ಕಮಾನಿನಲ್ಲಿ ಬೆಣೆಕಲ್ಲುಗಳನ್ನು 
ಕೂರಿಸುವಾಗ ಮುಂದಿನ ಎರಡು ಕಣ್ಣುಗಳಿಗೂ ಸರಕಟ್ಟುಗಳನ್ನು ಜೋಡಿಸಿರಬೇಕು. ಪುರ್ವ ಸಿದ್ಧತೆಗಳೆಲ್ಲವೂ ಮುಗಿದ ಮೇಲೆ ಸರಕಟ್ಟಿನ ತೀರುಗಳ ಮೇಲೆ ಪಕ್ಕದ ಕಂಬಗಳ ಬೆನ್ನುಕಲ್ಲುಗಳಿಂದ ಪ್ರಾರಂಭಿಸಿ ಮಟ್ಟವಾಗಿ ಕಂಬದ ಪಕ್ಕದಲ್ಲಿ ಕಮಾನಿನ ನಡುಗಲ್ಲನ್ನು 
ಹೊಡೆಯುವಾಗ ಅದರ ಒದೆಯನ್ನು ತಡೆಯುವುದಕ್ಕಾಗಿ ಮುಂದಿನ ಕಮಾನಿನಲ್ಲಿ ಮೂರನೆಯ ಎರಡು ಭಾಗ ಕಲ್ಲುಗಳನ್ನೂ ಅದರ ಮುಂದಿನದರಲ್ಲಿ ಮೂರನೆಯ ಒಂದು ಭಾಗವನ್ನು ಎರಡು ಪಕ್ಕಗಳಲ್ಲಿಯೂ ಜೋಡಿಸಿರಬೇಕು. ಈಗ ಪುರ್ತಿಯಾದ ಕಮಾನಿನಲ್ಲಿ 
ನಡುಗಲ್ಲುಗಳನ್ನು ದೊಡ್ಡ ಮರದ ದಿಮ್ಮಿಗಳನ್ನು ಮೇಲಕ್ಕೆತ್ತಿ ಒಂದೊಂದು ನಡುಗಲ್ಲಿನ ಮೇಲೂ 20-30 ಏಟುಗಳನ್ನು ಹೊಡೆದು ಬಿಗಿಯಾಗಿ ಗಾರೆಯಲ್ಲಿ ಕೂರಿಸಬೇಕು. ಆಗ ಕಮಾನು ಎರಡೂ ಪಕ್ಕಗಳನ್ನು ಒದೆದು ಸ್ವತಂತ್ರವಾಗಿ ನಿಲ್ಲುತ್ತದೆ. ಆಮೇಲೆ ಕೆಳಗಿನ 
ಸರಕಟ್ಟುಗಳನ್ನು ಮರಳು ಪೆಟ್ಟಿಗೆಗಳ ಮರಳನ್ನು ತೆಗೆದು ಕೊಂಚ ಕೆಳಕ್ಕೆ ಇಳಿಸಿ, ಮುಂದೆ ಮೂರನೆಯ ಕಮಾನಿಗೆ ಸಾಗಿಸಬಹುದು. ಹೀಗೆ ಒಂದಾದ ಮೇಲೊಂದು ಕಮಾನನ್ನು ಪುರೈಸಿ ನೆತ್ತಿಯ ಕಲ್ಲುಗಳನ್ನು ಹೊಡೆಯಬೇಕು. ಕಮಾನುಗಳೆಲ್ಲವೂ ಪುರೈಸಿದ ಮೇಲೆ 
ಸೇತುವೆಯ ಕೆಲಸ ಮುಗಿದಂತೆ. ಮೇಲುಗಡೆ ಕಮಾನಿನ ಬೆನ್ನುಗಳಲ್ಲಿ ಹಗುರವಾದ ಕಲ್ಲುಗಾರೆಯನ್ನೋ ಕಾಂಕ್ರೀಟನ್ನೋ ತುಂಬಿ ಸೇತುವೆಯ ಎರಡು ಪಕ್ಕಗಳಲ್ಲಿಯೂ ಗೋಡೆಗಳನ್ನೆತ್ತಿ ಪ್ಯಾರಾಪೆಟ್ಟನ್ನು ಕಟ್ಟಿದರಾಯಿತು. ಇಂದಿನ ಭಾರವಾದ ವಾಹನಗಳನ್ನು ಹೊರುವುದಕ್ಕೆ 
ಸೇತುವೆಯ ಮೇಲಿನ ರಸ್ತೆಗೆ ಸಿಮೆಂಟ್ ಕಾಂಕ್ರೀಟನ್ನು ಹಾಕಬೇಕು.

ಉಕ್ಕಿನ ಕಮಾನುಗಳು : ಸಂಪುರ್ಣವಾಗಿ ಉಕ್ಕಿನಿಂದ ಸೇತುವೆಯನ್ನು ಮೊದಲು ಕಟ್ಟಿದ್ದು 1879ರಲ್ಲಿ. ಉಕ್ಕು ತುಯ್ತದಲ್ಲಿ ಚ. ಸೆಂಮೀಗೆ 1300 ಕಿಗ್ರಾಂಗಳನ್ನು, ಜಾರುವ ತ್ರಾಸದಲ್ಲಿ 930 ಕಿಗ್ರಾಂಗಳನ್ನು ಕಟ್ಟಡಗಳಲ್ಲಿ ಹೊರಬಲ್ಲದು. ಈ ಶತಮಾನದಲ್ಲಿ ಉಕ್ಕಿನ ಕಮಾನುಗಳ 
ಅಗಲವನ್ನು ಹೆಚ್ಚಿಸುವುದಕ್ಕಾಗಿ ಹೆಚ್ಚು ತುಯ್ತವನ್ನು ತಡೆಯಬಲ್ಲ ಉಕ್ಕನ್ನು ತಯಾರಿಸಿದ್ದಾರೆ. ಇದಕ್ಕಾಗಿ ಉಕ್ಕಿಗೆ ಕೊಂಚ ಸಿಲಿಕಾನ್, ನಿಕ್ಕಲ್, ಕ್ರೋಮಿಯಮ್ ಇಲ್ಲವೆ ಇಂಗಾಲವನ್ನು ಬೆರೆಸುತ್ತಾರೆ. ಇಂಗಾಲ ಮಿಶ್ರವಾದ ಉಕ್ಕುಗಳು ಚ. ಸೆಂಮೀಗೆ 1400 ಕಿಗ್ರಾಂ 
ತುಯ್ತವನ್ನು ತಡೆಯಬಲ್ಲವು. ನ್ಯೂಯಾರ್ಕಿನ ಹೆಲ್ಗೇಟ್ ಸೇತುವೆಯಲ್ಲಿ ಉಕ್ಕಿಗೆ ಇಂಗಾಲವನ್ನು, ಆಸ್ಟ್ರೇಲಿಯದ ಸಿಡ್ನಿ ಬಂದರಿನ ಸೇತುವೆಯಲ್ಲಿ ಸಿಲಿಕಾನನ್ನು, ಕೆನಡದ ಕ್ವಿಬೇಕ್ ಚಾಚುತೊಲೆಯ ಸೇತುವೆಯಲ್ಲಿ ನಿಕ್ಕಲ್ಲನ್ನು ಕೊಂಚ ಬೆರೆಸಿದ್ದಾರೆ.

ಸ್ವತಂತ್ರವಾದ ಕಮಾನುಗಳಲ್ಲಿ ತ್ರಾಸಗಳನ್ನು ಲೆಕ್ಕ ಹಾಕುವುದು ಸುಲಭವಲ್ಲ. ಕೆಲವು ವಿಚಾರಗಳನ್ನು ಸಾಕಷ್ಟು ಪ್ರಮಾಣವಿಲ್ಲದೆ ಅಂಗೀಕರಿಸಬೇಕಾಗುತ್ತದೆ. ಅದಕ್ಕಾಗಿ ದೊಡ್ಡ ಉಕ್ಕಿನ ಕಮಾನುಗಳ ನೆತ್ತಿಯಲ್ಲಿ ಒಂದು ಆಣಿಯನ್ನೋ ಬೆನ್ನುಗಳಲ್ಲಿ ಎರಡು ಆಣಿಗಳನ್ನೋ 
ನೆತ್ತಿಯಲ್ಲಿಯೂ ಬೆನ್ನುಗಳಲ್ಲಿಯೂ ಒಟ್ಟು ಮೂರು ಆಣಿಗಳನ್ನೋ ಹೊಡೆಯುತ್ತಾರೆ. ಆಗ ತ್ರಾಸಗಳನ್ನು ಸರಿಯಾಗಿ ಲೆಕ್ಕಹಾಕಬಹುದು.
ಕಮಾನಿನ ಕಣ್ಣಿಗೂ ಏರಿಕೆಗೂ ಇರುವ ದಾಮಾಷೆ 4ಕ್ಕೆ 1ರಿಂದ ಹಿಡಿದು 10ಕ್ಕೆ ಒಂದರವರೆಗೂ ವ್ಯತ್ಯಾಸವಾಗುತ್ತದೆ. ಕಮಾನಿನ ದಪ್ಪ 10ಕ್ಕೆ 1ರಿಂದ, 40ಕ್ಕೆ 1ರ ವರೆಗೂ ಕಡಿಮೆಯಾಗುತ್ತದೆ.

1917ರಲ್ಲಿ ನ್ಯೂಯಾರ್ಕಿನಲ್ಲಿ ಕಟ್ಟಿದ ಹೆಲ್ಗೇಟ್ ಉಕ್ಕಿನ ಕಮಾನಿನ ಸೇತುವೆಯಲ್ಲಿ ಬೆನ್ನುಗಳ ಮೇಲೆ ಎರಡು ಆಣಿಗಳಿವೆ. ಗೋಪುರಗಳ ನಡುವಿನ ಅಗಲ 310ಮೀ. ಆಣಿಗಳ ನಡುವಿನ ಅಗಲ 298 ಮೀ. ಒಳಮುಖದ ನೆತ್ತಿಯ ಎತ್ತರ 67.8 ಮೀ ಸೇತುವೆಯ ಒಟ್ಟು ಉದ್ದ 549 
ಕಿಮೀ. ಈ ಕಮಾನಿನ ಎರಡು ಕಡೆಗಳಲ್ಲಿಯೂ ಕಾಂಕ್ರೀಟಿನ ಕಮಾನುಗಳನ್ನು, ಉಕ್ಕಿನ ಗರ್ಡರಿನ ಸೇತುವೆಗಳು, ಬ್ಯಾಸ್ಕ್ಯೂಲ್ ಸೇತುವೆಗಳು, 305 ಮೀ ಉದ್ದದ ಬೋಸಿಪ್ರಿಂಗ್ ಗರ್ಡರ್ ಸೇತುವೆ-ಇವು ಸೇರಿವೆ. ಕಮಾನಿನ ಎರಡು ಕೊನೆಗಳಲ್ಲಿಯೂ ಪ್ರಬಲಿತ 
ಕಾಂಕ್ರೀಟಿನಿಂದ ಗೋಪುರಗಳನ್ನು ಕಟ್ಟಿ ಹೊರಗಡೆ ನಯವಾದ ಗ್ರಾನೈಟ್ ಕಲ್ಲಿನ ಹೊದಿಕೆಯನ್ನೂ ಕೊಟ್ಟಿದ್ದಾರೆ. ಈ ಗೋಪುರಗಳ ತಳಪಾಯದಲ್ಲಿ ನೀರಿನ ಮಟ್ಟದ ಕೆಳಗೆ 33.25 ಮೀ ಆಳದಲ್ಲಿ 5.50 ಮೀ ವ್ಯಾಸದ 21 ಕಾಂಕ್ರೀಟಿನ ಕೇಸಾನುಗಳನ್ನು ಹೂಳಿದ್ದಾರೆ. 
ಮೇಲುಗಡೆ ಸೇತುವೆಯ ಅಗಲ 28.4 ಮೀ ಇದರ ಮೇಲೆ ನಾಲ್ಕು ವಾಹನಗಳ ದಾರಿಗಳಿವೆ. 

ಆಸ್ಟ್ರೇಲಿಯದ ಸಿಡ್ನಿ ಬಂದರಿನ ಮೇಲೆ 503.25 ಮೀ ಕಣ್ಣಿನ ಉಕ್ಕಿನ ಕಮಾನಿನ ಸೇತುವೆ ಪ್ರಾರಂಭವಾದ 5 ವರ್ಷಗಳ ಮೇಲೆ ನ್ಯೂಯಾರ್ಕಿನಲ್ಲಿ ಇದಕ್ಕಿಂತ 63.5 ಸೆಂಮೀ ಅಗಲವಾದ ಕಣ್ಣಿನ 503.89 ಮೀ ಬೆಯಾನ್ ಸೇತುವೆಯನ್ನು ಪ್ರಾರಂಭಿಸಿ ಆಸ್ಟ್ರೇಲಿಯದ ಸೇತುವೆ 
ಮುಗಿಯುವುದಕ್ಕಿಂತ ನಾಲ್ಕು ತಿಂಗಳ ಮುಂಚೆ 1931ರಲ್ಲಿ ಕಟ್ಟಿ ಮುಗಿಸಿ ಆ ದಾಖಲೆಯನ್ನು ಮುರಿದರು. ಈಗ ಇದು ಪ್ರಪಂಚದ ಉಕ್ಕಿನ ಕಮಾನಿನ ಸೇತುವೆಗಳಲ್ಲೆಲ್ಲಾ ಅತ್ಯಂತ ಅಗಲವಾದ ಕಣ್ಣಿನ ಸೇತುವೆ.

1932ರಲ್ಲಿ ಮುಗಿದ ಸಿಡ್ನಿ ಬಂದರಿನ ಸೇತುವೆಯಲ್ಲಿ ಕಮಾನು ಚಿಮ್ಮುವ ಕಡೆ (ಸಿಂ್ವಗಿಂಗ್) ನೀರಿನ ಮಟ್ಟದ ಮೇಲೆ 8.23 ಮೀ ಯಷ್ಟು ಎತ್ತರವಾಗಿದೆ. ಅದರ ಮೇಲೆ ಕಮಾನು 106.75ಮೀ ಎತ್ತರಕ್ಕೆ ಏರುತ್ತದೆ. ಈ ಸೇತುವೆಯಲ್ಲಿ ಬೆನ್ನುಗಳ ಮೇಲೆ ಎರಡು 
ಆಣಿಗಳಿವೆ. ನೆತ್ತಿ ಸ್ವತಂತ್ರ್ಯವಾಗಿದೆ. ಕಮಾನಿನ ಸರಕಟ್ಟಿನ ಎತ್ತರ ಮಧ್ಯದಲ್ಲಿ 18.3 ಮೀ ಗಳಷ್ಟಿದೆ. ಎಂದರೆ ಕಮಾನಿನ ನೆತ್ತಿಯ ಮೇಲುಭಾಗ ನೀರಿನ ಮಟ್ಟದಿಂದ 133.28ಮೀ ಎತ್ತರವಾಯಿತು. ಕಮಾನಿನ ನಡುವಿನ ಸರಕಟ್ಟು ‘ಎನ್’ ಆಕಾರದಲ್ಲಿದೆ. ಒಂದು 
ಸರಕಟ್ಟಿನ ಮಧ್ಯದಿಂದ ಇನ್ನೊಂದರ ಮಧ್ಯಕ್ಕೆ 30.04 ಮೀ ಅಂತರವಿದೆ.  ಒಂದೊಂದು ಸರಕಟ್ಟಿನ ಒಳಗೂ ಹೊರಗೂ ಒಂದೊಂದು ರೈಲ್ವೆ ದಾರಿಯಿದೆ, ಎಂದರೆ ನಾಲ್ಕು ಪ್ರತ್ಯೇಕವಾದ ರೈಲ್ವೆ ದಾರಿಗಳಾಯಿತು. ಇನ್ನೂ ಆಚೆಗೆ ಎರಡು ಕೊನೆಗಳಲ್ಲಿಯೂ 3.05ಮೀ 
ಅಗಲದ ಕಾಲುದಾರಿಗಳಿವೆ. ಸೇತುವೆಯ ಮಧ್ಯದಲ್ಲಿ 17.38 ಮೀ ಅಗಲದ ರಸ್ತೆ ಇದೆ. ಒಟ್ಟು 488ಮೀ ಅಗಲವಾದ ಈ ರಸ್ತೆ ನೀರಿನ ಗರಿಷ್ಠಮಟ್ಟದ  ಮೇಲೆ 51.85ಮೀ ಎತ್ತರವಾಗಿದೆ. ಸೇತುವೆಯ ಎರಡು ಕಡೆಗಳಲ್ಲಿಯೂ ಈ ಕಡೆ ಒಂದು, ಆ ಕಡೆ ಒಂದು-ಹೀಗೆ 
ಎರಡು ಕಾಂಕ್ರೀಟಿನ ಗೋಪುರಗಳಿವೆ. ಮೇಲು ಮುಖದಲ್ಲಿ ನಯವಾದ ಕಲ್ಲಿನ ಚಪ್ಪಡಿಗಳಿಂದ ಮುಚ್ಚಿದ ಗೋಪುರಗಳು ತಳಹದಿಯ ಮೇಲೆ 83.88ಮೀ ಎತ್ತರಕ್ಕೆ ಏರಿ ಸೇತುವೆಯ ಅಂದವನ್ನು ಹೆಚ್ಚಿಸುತ್ತವೆ. ಈ ಸೇತುವೆಯಲ್ಲಿ 51,000 ಟನ್ ಉಕ್ಕು 
ಉಪಯೋಗವಾಗಿದೆ. (ಇದರ ಮೂರರಷ್ಟು ಉದ್ದವಾದ ಫೋರ್ತ್‌) ಚಾಚುತೊಲೆಯ ಸೇತುವೆಯಲ್ಲಿ 51.500 ಟನ್  ಉಕ್ಕಿದೆ). ಆ ಪೈಕಿ 38,000 ಟನ್ ಗಳು ಕಮಾನುಗಳಲ್ಲಿವೆ. ಇಲ್ಲಿ ಉಪಯೋಗಿಸುವ ಕೆಲವು ತಗಡುಗಳು 5.40ಸೆಂಮೀ ದಪ್ಪವಾಗಿವೆ. ಇವನ್ನು 
ಎರಡೂ ಕಡೆಗಳಲ್ಲಿಯೂ 0.305ಮೀ ಅಗಲ, 3.17ಸೆಂಮೀ  ದಪ್ಪದ ಸಮಕೋನಗಳಿಂದ ಜೋಡಿಸಿದ್ದಾರೆ. ಕಮಾನಿನ ಆಕಾರದ ಬೆಡಗು, ಹಿರಿದಾದ ಅಳತೆಯ ಪ್ರಮಾಣ, ಗಾಂಭೀರ್ಯ ಮತ್ತು ಇದರ ನಿರ್ಮಾಣದಲ್ಲಿ ತೋರಿಸಿರುವ ಕಲ್ಪನಾಚಾತುರ್ಯ ನೈಪುಣ್ಯಗಳಿಂದ 
ಇದೊಂದು ಕಲಾಕೃತಿಯಾಗಿದೆ.

ಎರಡನೆಯ ಮಹಾಯುದ್ಧ ಮುಗಿದ ಮೇಲೆ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಭಾಟಾ ಮಾರ್ಗಗಳನ್ನು ರಸ್ತೆಗಳನ್ನೂ ಮೇಲ್ಪಾಡು ಮಾಡುವ ಸಂದರ್ಭದಲ್ಲಿ ಸಿಮೆಂಟ್ ಕಾಂಕ್ರೀಟಿನಿಂದಲೂ ಪ್ರಬಲಿತ ಕಾಂಕ್ರೀಟಿನಿಂದಲೂ ಅನೇಕ ಕಮಾನಿನ ಸೇತುವೆಗಳನ್ನು ಕಟ್ಟಿದ್ದಾರೆ. 
ಪ್ರಪಂಚದಲ್ಲಿಯೇ ಅತ್ಯಂತ ಅಗಲವಾದ ಸಾದಾ ಕಾಂಕ್ರೀಟಿನ ಸೇತುವೆ ಕ್ಲೀವ್ ಲ್ಯಾಂಡಿನಲ್ಲಿ ರಾಖೀ ನದಿಯ ಮೇಲೆ 1910ರಲ್ಲಿ ಕಟ್ಟಿದ 85.4ಮೀ ಅಗಲದ ಕಮಾನಿನ ಸೇತುವೆ. ಆಮೇಲೆ ಪ್ರಬಲಿತ ಕಾಂಕ್ರೀಟಿನಲ್ಲಿ 122ಮೀ ಕಣ್ಣಿನಿಂದ 196.725ಮೀ ಕಣ್ಣಿನವರೆಗೂ ಅನೇಕ ಕಮಾನಿನ ಸೇತುವೆಗಳು ನಿರ್ಮಾಣವಾಗಿವೆ. ಸ್ವೀಡನ್ನಿನಲ್ಲಿ ಸ್ಯಾಂಡೋ ನದಿಯ ಮೇಲೆ ಕಟ್ಟಿದ 264.13ಮೀ ಕಣ್ಣಿನ ಕಮಾನಿನ ಸೇತುವೆ ಈವರೆಗೆ ಕಟ್ಟಿರುವ ಸೇತುವೆಗಳಲ್ಲಿ ಅತ್ಯಂತ ಅಗಲವಾದ ಕಣ್ಣುಳ್ಳದ್ದು. 	 	          (ಎಚ್.ಸಿ.ಕೆ.)

ಸ್ವಲ್ಪ ಅವಧಿ, ನಿರ್ಮಾಣದ ಜಟಿಲತೆಯಿಂದಾಗಿ ಕಮಾನು ಸೇತುವೆಗಳ ನಿರ್ಮಾಣವು ಸ್ಥಗಿತಗೊಂಡಿತ್ತು. ಈಚೆಗೆ ಸುಧಾರಿತ ನಿರ್ಮಾಣ ವಿಧಾನಗಳಿಂದ ಕಮಾನು ಸೇತುವೆಗಳ ನಿರ್ಮಾಣವು ಪ್ರಾರಂಭವಾಗಿ, ಚೀನ ದೇಶವು ಮುಂಚೂಣಿಯಲ್ಲಿದೆ. ಚೀನ ದೇಶದಲ್ಲಿ ವಿಶ್ವದ 
ಅತೀ ಅಗಲ ಕಣ್ಣಿನ ಕಾಂಕ್ರೀಟು ಕಮಾನು ಸೇತುವೆ ಇದ್ದು, ಇದರ ಕಣ್ಣಿನ ಅಗಲ 420ಮೀ ಇದೆ. 				        (ಎಂ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ